Monday, April 27, 2009

ಮಿಂಚಿನ ಓಟ-ಪೂಜಾರಿ ಸ್ಟೈಲ್!


ಓಟಿಗಾಗಿ ಓಟ-ಏನಿದು ಅಂದ್ಕೋಂಡ್ರಾ.....?
ಇದು ಸಾಲಮೇಳದ ಸರದಾರ - ಬಿ.ಸಿ.ರೋಡಿನ "ಚೆನ್ನಮ್ಮ ಕುಟೀರ"ದ ೭೨ರ ತರುಣ ಜನಾರ್ಧನ ಪೂಜಾರಿ ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರಚಾರ ಮಾಡೋ ಸ್ಟೈಲು.
ವಿಟ್ಲದ ಪೇಟೆಯಲ್ಲಿ ಮಂಗಳೂರು ರಸ್ತೆಯಲ್ಲಿನ ಕಾಂಗ್ರೆಸ್ಸ್ ಪಕ್ಷದ ಕಛೇರಿಗೆ ಆಗಮಿಸಿದ ಜನಾರ್ಧನ ಪೂಜಾರಿ ಸಂಜೆ ೬ಘಂಟೆ ಸುಮಾರಿಗೆ ಪ್ರಮುಖ ಬೀದಿಗಳಲ್ಲಿ ಪ್ರಚಾರ ಶುರುವಿಟ್ಟದ್ದೆ ಓಟದೊಂದಿಗೆ! ಇಡೀ ಪೇಟೆಗೆ ಕೇವಲ ೧೦-೧೫ ನಿಮಿಷಗಳಲ್ಲಿ ಪ್ರದಕ್ಷಿಣೆ ಬಂದು...ಮತದಾರರೆಲ್ಲ ಮತಯಾಚಿಸಿದ ಪೂಜಾರಿಯವರನ್ನು ಹಿಂಬಾಲಿಸಿದ ಕಾರ್ಯಕರ್ತರು ಓಡುತ್ತ,ಓಡುತ್ತ ಸುಸ್ತಾದರು.
ವಿಟ್ಲದಲ್ಲಿದ್ದ ಜನಾರ್ಧನ ಪೂಜಾರಿಯವರು ನನ್ನ ಕ್ಯಾಮರಾಕ್ಕೆ ವಿಟ್ಲ-ಪುತ್ತೂರು ಮುಖ್ಯ ರಸ್ತೆಯಲ್ಲಿ ಪೋಸ್ ನೀಡಿದ್ದು ಹೀಗೆ.
ಫೋಟೊ: ಪುತ್ತೂರು-ವಿಟ್ಲ ಮುಖ್ಯ ರಸ್ತೆಯಲ್ಲಿ ಬಿ.ಜನಾರ್ಧನ ಪೂಜಾರಿ

Saturday, April 25, 2009

ದೇವಸ್ಥಾನ ಕೆಲಸ ಪ್ರಗತಿ(ವಿಟ್ಲ)


ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಕೆಲಸ ಪ್ರಗತಿಯಲ್ಲಿದೆ.ಕೆತ್ತನೆಯ ಶಿಲ್ಪದಿಂದ ಕೂಡಿದ ಶಿಲೆಗಳನ್ನು ಸೇರಿಸುವ ಕೆಲಸವೂ-ಮುರಕಲ್ಲಿನ ಗೋಡೆ ನಿರ್ಮಾಣವು ಏಕಕಾಲದಲ್ಲಿ ನಡೆಯುತ್ತಿದೆ.
ಹಾಗೆ ದೇವಸ್ಥಾನದ ಕೆರೆಯ ಕೆಲಸ ಕೂಡ ಸಾಗುತ್ತಿದೆ.ಕೆರೆಯ ಕಟ್ಟೆ ಕಟ್ಟುವ ಕೆಲಸವೂ ನಡೆಯುತ್ತಿದೆ.
ಫೋಟೊ :ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ

Friday, April 24, 2009

ಚುನಾವಣಾ ಕಣ -2009

ಚುನಾವಣೆ ದಿನ ಸಮೀಪಿಸುತ್ತಿದ್ದಂತೆ ವಿಟ್ಲದ ರಾಜ ಬೀದಿ ಚುನಾವಣ ಆರ್ಭಟಕ್ಕೆ ವೇದಿಕೆಯಾಗುತ್ತಿದೆ. ಮೊದಲ ಹಂತದ ಚುನಾವಣಾ ಪ್ರಚಾರ ನಂತರ ವಿವಿಧ ಪಕ್ಷಗಳ ಸ್ಟಾರ್ ಪ್ರಚಾರಕರು ವಿಟ್ಲದಲ್ಲಿ ದರ್ಶನವೀಯತೊಡಗಿದ್ದಾರೆ.
ಕಳೆದವಾರ ನಳಿನ್ ಕುಮಾರ..ಬಿ.ಜೆ.ಪಿ ಅಭ್ಯರ್ಥಿ ರೋಡ್ ಶೋಮೂಡಿ ಪ್ರಚಾರ ನಡೆಸಿದರೆ,"ಸ್ವಾಭಿಮಾನಿ" ರಾಮ ಭಟ್ ಉರಿಮಜಲು ಮನೆ-ಮನೆ ಭೇಟಿಯತ್ತ ಗಮನಕೊಡುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಜನಾರ್ಧನ ಪೂಜಾರಿ ಪರ ಡಾ!ಜಿ. ಪರಮೇಶ್ವರ್ ಶುಕ್ರವಾರ ಸಂಜೆ
ಪ್ರಚಾರಸಭೆಯಲ್ಲಿ ಭಾಗವಹಿಸಿದ್ದರು.ಮುಖ್ಯಮಂತ್ರಿ ಯಡ್ಯೂರಪ್ಪ ಬಂಟ್ವಾಳ,ಪುತ್ತೂರುನಲ್ಲಿ ಬಿ.ಜೆ.ಪಿ ಪ್ರಚಾರ ಸಭೆಯಲ್ಲಿ ದಿ.೨೩-೪-೦೯ರ ಸಂಜೆ ಭಾಗವಹಿಸಿದ್ದರು.ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದಿ-೨೬-೪-೦೯ರಂದು ನೆಹರೂ ಮೈದಾನದಲ್ಲಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಬಿ.ಜೆ.ಪಿ ಜಿಲ್ಲಾ ಕಾರ್ಯದರ್ಶಿ ನಳಿನ್ ಗೆಲುವನ್ನು ಪ್ರತಿಷ್ಟೆ ವಿಷಯವಾಗಿಸಿಕೊಂಡಿರುವ ಪರಿವಾರಕ್ಕೆ ರಾಮಭಟ್ ಎಷ್ಟು ಓಟು ಕಸಿಯಬಲ್ಲರೆಂಬ ಚಿಂತೆ.
ಕಾಂಗ್ರೆಸ್ ಪಾಳಯದೆಲ್ಲಾ ಗುಂಪುಗಳ ಸರ್ವ ಸಮ್ಮತ ಅಭ್ಯರ್ಥಿ ಪೂಜಾರಿ ಗೆಲುವಿನ ಕನಸು ಕಾಣುತ್ತಿದ್ದಾರೆ.ಜೊತೆಯಲ್ಲಿ ಈ ಬಾರಿ ಪುತ್ತೂರಿನ "ಸುದ್ದಿಪತ್ರಿಕೆ"ಯ ಡಾ.ಶಿವಾನಂದ ಅಭ್ಯರ್ಥಿಯಾಗಿ ಸುದ್ದಿಮಾಡಿದ್ದಾರೆ.
ಚರ್ಚ್ ದಾಳಿ,ಪಬ್ ದಾಳಿ..ಜಾತಿ ಮತಗಳ ಹಂಚಿಕೆ ಅಭ್ಯರ್ಥಿಗಳ ಭವಿಷ್ಯ ನಿರ್ಣಯಿಸಲಿದೆ.ಚುನಾವಣಾ ನೀತಿ ಸಂಹಿತೆಯ ಬಿಸಿ ಎಲ್ಲ ಪಕ್ಷಗಳಿಗು ತಟ್ಟಿದ್ದು ಈ ಬಾರಿ..ಮೈಕ್-ಬ್ಯಾನರ್ ಭರಾಟೆಯೇ ಇಲ್ಲದೆ ಮತದಾರ ನಿರಾಳವಾಗಿದ್ದಾನೆ

Tuesday, April 14, 2009

ನಿಧಿಸಂಚಯನ-೨೦೦೯


ವಿಟ್ಲದ ಪಂಚಲಿಂಗೇಶ್ವರ ದೇಗುಲದಲ್ಲಿ ಪ್ರತೀ ವರ್ಷ ವಿಷು ಸಂಕ್ರಮಣ ದಿನ ನಡೆಯುವ ನಿಧಿ ಸಂಚಯನ ಕಾರ್ಯಕ್ರಮ ಎಪ್ರಿಲ್ ೧೩ರಂದು ದೇವಸ್ಥಾನದೆದುರಿನ ರಥದ ಗದ್ದೆಯಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಅದ್ದೂರಿಯಾಗಿ ನಡೆಯಿತು.
ಜೀರ್ಣೋದ್ಧಾರಗೊಳ್ಳುತ್ತಿರುವ ದೇವಳದಲ್ಲಿ ಪ್ರತೀ ವಿಷುವಿನಂದು ಭಕ್ತಾದಿಗಳೆಲ್ಲಾ ಸೇರಿ ಕೄಷ್ಯುತ್ಪನ್ನಗಳನ್ನು ಸಂಗ್ರಹಿಸುವ ಮೂಲಕ ೪ ಕೋಟಿ ಮಿಕ್ಕಿ ಧನವನ್ನು ದೇಗುಲದ ಕೆಲಸಕ್ಕಾಗಿ ಅರ್ಪಿಸಿದ್ದು ದಾಖಲೆಯೆ ಸರಿ.ಅದರ ಜೊತೆಗೆ ಈ ಸಾರಿ ಅನೇಕ ಸ್ಥಳೀಯ ಸಂಸ್ಥೆಗಳು ,ಯುವಕ ಮಂಡಲಗಳು,ಸಂಘಗಳು ಕೂಡ ಈ ಬಾರಿ ದೇಣಿಗೆ ಸಮರ್ಪಿಸಿದವು.
ಈ ಬಾರಿಯ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರಿ ಮಹಾವೀರ ಅಜ್ರಿ,ಮಂಗಳೂರಿನ ನ್ಯಾಯವಾದಿ ಶ್ರೀಪಿ.ಪಿ.ಹೆಗ್ಡೆ,ವಿಟ್ಲ ಪಡ್ನೂರಿನ ರವಿಶಂಕರ್ ಬಲಿಪಗುಳಿ,ನಳಿನಿ ಲೋಕಪ್ಪ ಗೌಡ,ಪುತ್ತೂರಿನ ಶಾಸಕಿ ಮಲ್ಲಿಕಾ ಪ್ರಸಾದ್-ಮತ್ತು ಮುಂಬೈ,ಬೆಂಗಳೂರು ಕಮಿಟಿಗಳ ಅಧ್ಯಕ್ಷರುಗಳು ಭಾಗವಹಿಸಿದ್ದರು.
ವಿಟ್ಲದ ಪಂಚಲಿ0ಗೇಶ್ವರ ದೇಗುಲದ ಆನುವಂಶಿಕ ಮೊಕ್ತೇಸರ ಜನಾರ್ಧನ ವರ್ಮ ಅರಸರು ಶುಭ ಹಾರೈಕೆಯ ನುಡಿಗಳನ್ನಾಡಿದರು..ಮೋಹನದಾಸ ಸ್ವಾಮೀಜಿ ಮಾಣಿಲ ಆಶೀರ್ವಚನವಿತ್ತರು.ಎಲ್.ಎನ್.ಕೂಡೂರು,ಜನಾರ್ಧನ ಪೈ ಉಪಸ್ಥಿತರಿದ್ದರು.
ಈ ಬಾರಿಯೂ ಅಧಿಕ ಮೊತ್ತದ ನಿಧಿ ಸಂಗ್ರಹದ ನಿರೀಕ್ಷೆಯಿದೆ.
ಕಾರ್ಯಕ್ರಮದ ಅತಿಥಿಗಳೊಬ್ಬರಾದ ಮಹಾವೀರ ಅಜ್ರಿ-ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೄದ್ಧಿ ಯೋಜನೆಯ ನಿರ್ದೇಶಕರು ಹಿಡಿಯಕ್ಕಿ ಯೋಜನೆಗೆ ಚಾಲನೆ ನೀಡ ಬೇಕೆಂದೂ ಸಲಹೆ ನೀಡಿ -ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ದೇಗುಲ ನಿರ್ಮಾಣದಲ್ಲಿ ಇದರಿಂದ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಲು ಸಾಧ್ಯವೆಂದು ತಮ್ಮ ಆಶಯ ಮುಂದಿಟ್ಟರು .ಕೂಡಲೆ ಸಭೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮಾಭಿವೃದ್ಧಿ ಯೋಜನೆಯ ಬಂಧುಗಳು-ಹಿಡಿಯಕ್ಕಿ ಯೋಜನೆಗೆ ಚಾಲನೆ ನೀಡಿದರು.ಒಕ್ಕೂಟದ ಅಧ್ಯಕ್ಷರಾದ ಜಯಕರ ಅಮೈ ಈ ಬಗ್ಗೆ ಘೋಷಣೆ ಮಾಡಿದರು.
(photo-ಸಭಾ ಕಾರ್ಯಕ್ರಮ)

Saturday, April 11, 2009

ವಿಷು ಸಂಕ್ರಮಣದ ಶುಭಾಶಯಗಳು


ವಿಷು ಸಂಕ್ರಮಣ ತುಳುನಾಡಿನ ಕೄಷಿಕರಿಗೆ ಪವಿತ್ರ ದಿನ.ಬೇಸಿಗೆಯ ಬಿಸಿಲನ್ನು ದೂರಮಾಡಿ ಮಳೆಗಾಲ ತರುವ ದಿನ-ವಿಷು.
ಸೌರಮಾನ ಯುಗಾದಿ ಆಚರಣೆಯ ಜೊತೆಯಲ್ಲಿ ವಿಟ್ಲ ಪಂಚಲಿಂಗೇಶ್ವರ ದೇಗುಲದಲ್ಲಿ ನಿಧಿ ಸಂಚಯನದ ಸಂಭ್ರಮ.ಹತ್ತಿರದ ಪುತ್ತೂರಿನಲ್ಲೂ ಮಹಾಲಿಂಗೇಶ್ವರ ದೇವಳದಲ್ಲು ಜಾತ್ರೆಯ ಹೊತ್ತು ಇದಾಗಿದೆ.ವಿಟ್ಲ ಸಮೀಪದ ಮಾಡದಲ್ಲಿ ಉಳ್ಳಾಲ್ತಿ ಮೆಚ್ಚಿ ಜಾತ್ರೆ ನಡೆಯುವುದೂ ಇದೇ ಸಮಯದಲ್ಲಿ.ಇಂತಹ ಖುಷಿಯ ಸಮಯದಲ್ಲಿ
ತಮಗೆಲ್ಲರಿಗೂ ವಿಷು ಸಂಕ್ರಮಣದ ಶುಭಾಶಯಗಳು