Friday, February 13, 2009

ಕೇಪು ಉಳ್ಳಾಲ್ತಿ ದೇವಸ್ಥಾನ


ಮಂಗಳೂರು ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೇಟೆಯಿಂದ ಸುಮಾರು ೫-೬ ಕಿ.ಮಿ. ದೂರದಲ್ಲಿ ಹಸಿರು ತೋಟದ ಮಧ್ಯೇ ಉಳ್ಳಾಲ್ತಿ ಎಂದೇ ಭಕ್ತರ ಬಾಯಲ್ಲಿ ಜನಜನಿತವಾಗಿರುವ ಕೇಪು ದುರ್ಗಾಪರಮೇಶ್ವರಿ ಸನ್ನಿಧಾನವಿದೆ.ಈ ದೇಗುಲದಲ್ಲಿನ ದೇವಿ ಭಕ್ತರ ಪಾಲಿಗೆ ಬಯಸಿದ್ದನ್ನು ಕರುಣಿಸುವ ಕಾಮಧೇನು.ದಶಂಬರ ತಿಂಗಳ ೧೪ (ಧನುಸಂಕ್ರಮಣ)ದಂದು ಇಲ್ಲಿ ನಡೆಯುವ ಜಾತ್ರೆ "ಕಜಂಬು" ಎಂದೆ ಖ್ಯಾತಿ ಹೊಂದಿದೆ.ಕಜಂಬು ಜಾತ್ರೆಯ ದಿನ ವಿಟ್ಲ ಸೀಮೆಯ ಭಕ್ತಾದಿಗಳು ಮತ್ತು ವಿಟ್ಲದ ಅರಸು ಮನೆತನದ ವಂಶಸ್ಥರು ತಮ್ಮ ಮನೆಯ ಮಕ್ಕಳನ್ನು ಉಳ್ಳಾಲ್ತಿ ದೇವರ ಸನ್ನಿಧಿಗೆ ಒಪ್ಪಿಸುವ ಸಂಪ್ರದಾಯವನ್ನು ನಡೆಸಿಕೊಡುತ್ತಾರೆ.ದೇಗುಲದ ಸಮೀಪದಲ್ಲಿಯೇ ಹರಿಯುವ ತೊರೆಯ ನೀರಿನಲ್ಲಿ ಸ್ನಾನ ಮಾಡಿಸಿ ತಂದ ಮಕ್ಕಳು ದೇವಿಯ ಗುಡಿಯ ಮೆಟ್ಟಿಲಿಗೆ ನಮಸ್ಕರಿಸಿ ಅಂಗಣದ ನಾಲ್ಕೂ ದಿಕ್ಕುಗಳಲ್ಲಿ ಕುಳಿತ ದೇವರ ಕೆಲಸ ಮಾಡುವ " ನಾಲ್ಪೋಳು" ಎಂದು ಕರೆಯಲ್ಪಡುವ ನಾಲ್ಕು ಆಳುಗಳಿಗೆ ಕಾಣಿಕೆ ಹಾಕಿ ಮುಂದುವರಿಯುತ್ತಾರೆ.ಸಮೀಪದಲ್ಲಿಯೇ ಇರುವ ಸುಬ್ರಾಯ ದೇವಸ್ಥಾನದಲ್ಲಿ ಭೋಜನ ವ್ಯವಸ್ಥೆ ಇರುತ್ತದೆ.
ಜಾತ್ರೆಯ ನಂತರದ ದಿನಗಳಲ್ಲಿ ಕೋಳಿ ಅಂಕ,ಭೂತ ನೇಮವೂ ನಡೆಯುತ್ತದೆ.ಕರಾವಳಿ ಜನರ-ತುಳುನಾಡಿನ ಜಾನಪದಕಲೆ ಮತ್ತು ಸಂಸ್ಕೄತಿಯನ್ನು ಪ್ರತಿಬಿಂಬಿಸುವ ಕಜಂಬು ಜಾತ್ರಾ ಸಮಯದಲ್ಲಿ ಸಂತೆ-ವ್ಯಾಪಾರ ವಹಿವಾಟು ನಡೆಸುವಂತಿಲ್ಲ.
ಕಜಂಬು ಜಾತ್ರೆ ನೋಡಬೇಕೆಂದಿದೆಯೇ ಹಾಗಿದ್ದಲ್ಲಿ ದಶಂಬರ ತಿಂಗಳಿನ ೧೪-೧೮ದಂದು ಬಿಡುವಿಟ್ಟುಕೊಳ್ಳಿ.ಜಾತ್ರೆಯ ಬಳಿಕ ಮಲರಾಯ ದೈವದ ನೇಮ ಜರುಗುತ್ತದೆ.
ಜಿಲ್ಲಾ ಕೇಂದ್ರ ಮಂಗಳೂರಿನಿಂದ ಸುಮಾರು ೩೬ಕಿ.ಮಿ ದೂರವಿರುವ ವಿಟ್ಲದಿಂದ ಸುಮಾರು ೭ಕಿ.ಮೀ ಅಂತರದಲ್ಲಿ ಈ ದೇಗುಲವಿದೆ.

No comments:

Post a Comment