Tuesday, February 24, 2009

ಚಟುವಟಿಕೆಗಳ ಕೇಂದ್ರ -ವಿಟ್ಲ



ವಿಟ್ಲದ ಇತಿಹಾಸ ,ಇಲ್ಲಿನ ಜಾನಪದ ವೈವಿಧ್ಯ,ಸಾಮರಸ್ಯದ ಬದುಕು ಬಯಸುವ ಜನತೆ...ಇವೆಲ್ಲದರ ಜೊತೆಜೊತೆಯಲ್ಲಿ ಪರಿಸರದಲ್ಲಿ ವರ್ಷಪೂರ್ತಿ ವಿಜೄಂಭಿಸುವ ಧಾರ್ಮಿಕ ಸಮಾರಂಭಗಳು,ಆಚರಣೆಗಳು ಈ ಭಾಗದ ಜನರ ನಿತ್ಯದ ಬದುಕನ್ನು ವರ್ಣಮಯವನ್ನಾಗಿಸಿದೆ. ಭೂತಾರಾಧನೆಯ ವಿವಿಧ ಪ್ರಕಾರಗಳು,ದೇವ-ದೈವಾರಾಧನೆಯಲ್ಲಿ, ಶಿವ-ವೈಷ್ಣವ ಆರಾಧನೆಯಲ್ಲಿ ಭೇದವೆಣಿಸದೆ ಆರಾಧಿಸುವ ಸಂಪ್ರದಾಯ ಇಲ್ಲಿನ ಜನರ ಮನಸ್ಸಿನ ಶ್ರೀಮಂತಿಕೆಯ ಪ್ರತೀಕ. ಇಂದು ವಿವಿಧ ನಂಬಿಕೆಗಳ,ಪಂಗಡಗಳ ಶ್ರದ್ಧಾ ಕೇಂದ್ರಗಳು ವಿಟ್ಲದಲ್ಲಿವೆ.ಸೀಮೆಯ ದೇವರಾದ ಪಂಚಲಿಂಗೇಶ್ವರ,ಚಿತ್ರಾಪುರ ಮಠಾಡಳಿತದ ಶ್ರೀಮತ್ ಅನಂತೇಶ್ವರ ದೇವಸ್ಥಾನ,ವಿಠೋಬ ಮಂದಿರ,ಭಗವತಿ ದೇಗುಲ, ರಾಮ ಮಂದಿರ, ಅಯ್ಯಪ್ಪ ದೇವಸ್ಥಾನ ಹೀಗೆ ಅನೇಕ ದೇವಾಲಯಗಳಲ್ಲದೆ,ಮುಸ್ಲಿಮ್-ಕ್ರಿಶ್ಚಿಯನ್ನರ ಪ್ರಾರ್ಥನಾ ಮಂದಿರಗಳು ಕೂಡಾ ಇಲ್ಲಿವೆ. ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ಮಕರ ಸಂಕ್ರಮಣದಿಂದ ಆರಂಭಗೊಳ್ಳುವ ಪಂಚಲಿಂಗೇಶ್ವರದೇವರ ಜಾತ್ರೆ ,ಉತ್ಸವಗಳಲ್ಲಿ ಊರಿನ ಜನ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ.ಸುಬ್ರಹ್ಮಣ್ಯ ಷಷ್ಟಿ ಸಂದರ್ಭದಲ್ಲಿ ಅನಂತೇಶ್ವರ ದೇಗುಲ ಜಾತ್ರೆ ನಡೆಯುತ್ತದೆ.ಪ್ರತಿ ದಶಂಬರ ತಿಂಗಳ ಕೊನೆಯ ವಾರದಲ್ಲಿ ಅಯ್ಯಪ್ಪ ದೇವಸ್ಥಾನದ ಜಾತ್ರೆ.ಇವೆಲ್ಲದರ ನಡುವೆ ವಿಷು, ಕೄಷ್ಣ ಜನ್ಮಾಷ್ಟಮಿ,ಗಣೇಶೋತ್ಸವ,ಶಾರದೋತ್ಸವ, ಹೀಗೆ ವರ್ಷ ಪೂರ್ತಿ ಧಾರ್ಮಿಕ ಆಚರಣೆಗಳು ಇಲ್ಲಿನ ಜನರ ಬದುಕಿನ ರಭಸಕ್ಕೆ ಹೊಂದಿಕೊಂಡತಿದೆ. ಅನಂತಾಡಿ,ಕೆಲಿಂಜ,ಮಾಣಿ ಭೂತಾರಾಧನೆಯ ಕೇಂದ್ರಗಳಾಗಿ ಸಹಸ್ರ-ಸಹಸ್ರ ಸಂಖ್ಯೆಯಲ್ಲಿ ಜನರನ್ನು ಸೆಳೆಯುತ್ತಿವೆ. ಸಾಂಸ್ಕೄತಿಕವಾಗಿ ,ಶೈಕ್ಷಣಿಕವಾಗಿ ಕೂಡಾ ಈ ಪ್ರದೇಶದಲ್ಲಿ ವಿಶೇಷ ಸಾಧನೆಗಳು ಜನಮನ್ನಣೆಗೆ ಪಾತ್ರವಾಗಿವೆ. ಇಲ್ಲಿನ ಎಲಿಮೆಂಟರಿ ಶಾಲೆ ಎಂದೆ ಹೆಸರಾದ ಸರಕಾರಿ ಮಾದರಿ ಶಾಲೆ,ಜೂನಿಯರ್ ಕಾಲೇಜು,ಅಳಿಕೆಯ ಸತ್ಯಸಾಯಿ ವಿದ್ಯಾ ಸಂಸ್ಥೆಗಳು,ಜೇಸಿಸ್ ಆಂಗ್ಲ ಮಾಧ್ಯಮ ಸೈಂಟ್ ರೀಟಾ ಶೈಕ್ಷಣಿಕ ಸಂಸ್ಥೆಗಳು ಪದವಿ ಕಾಲೇಜು,ತಾಂತ್ರಿಕ ತರಬೇತಿ ಸಂಸ್ಥೆ ವಿದ್ಯಾರ್ಥಿಗಳಲ್ಲಿನ ಅಕ್ಷರ ದಾಹವನ್ನು ತಣಿಸುತ್ತಿವೆ.

Friday, February 13, 2009

ವಿಟ್ಲ ಇತಿಹಾಸ





ವಿಟ್ಲದ ಬಗ್ಗೆ ನನಗೆ ಖುಶಿಪಡೋದಕ್ಕೇ ಕಾರಣ ಅದು ನನ್ನೂರೆಂಬುದು ಮಾತ್ರವಲ್ಲ.ಯಾರ ಮನಸ್ಸನ್ನು ಕೂಡಾ ಹಿಡಿದಿಡಬಲ್ಲಂತಹ ಇಲ್ಲಿನ ಇತಿಹಾಸ,ಮನವನ್ನು ಮುದಗೊಳಿಸುವ ದೈವ-ದೇವರುಗಳ ಕಾರಣೀಕ ನಿರೂಪಿಸುವ ಘಟನೆಗಳು ಇಲ್ಲಿನ ಜನರ ಬಾಯಲ್ಲಿ ನಿತ್ಯ ಕೇಳುವುದೇ ಸೊಗಸು.ಇಲ್ಲಿನ ಅರಮನೆ,ಅರಸು ವಂಶಜರ ಇತಿಹಾಸ-ಅರಮನೆ ಆಡಳಿತಕ್ಕೊಳಪಟ್ಟ ದೇಗುಲಗಳು,ಭೂತಾರಾಧನೆ ಇವೆಲ್ಲಾ ಸಾಲದೆ ಆಸಕ್ತರನ್ನು ತನ್ನತ್ತ ಸೆಳೆಯಲು?ಪ್ರತೀ ಊರಿಗೂ ಒಂದು ಇತಿಹಾಸ ,ಒಂದು ಐತಿಹ್ಯ ಇದ್ದುದೇ.ವಿಟ್ಲದ ಬಗ್ಗೇ ,ಇಲ್ಲಿನ ಅರಸು ಮನೆತನ ಬಗ್ಗೆ ೧೨೫೭ರ ವಗೆನಾಡು ಶಾಸನದಲ್ಲಿ ಉಲ್ಲೇಖವಿದೆ.ಈ ಶಾಸನದಲ್ಲಿ ತಾವು 'ಸಾಲೆ 'ಬಳಿಗೆ ಸೇರಿದವರೆಂದೂ,ಹನುಮ ಧ್ವಜಾಂಕಿತರೆಂದು ಕರೆದುಕೊಂಡಿದ್ದಾರೆ.ಈ ವಂಶದ ಆರಾಧ್ಯ ದೇವರು ವಿಟ್ಲ ಪಂಚಲಿಂಗೇಶ್ವರ.ಎಕ್ರೆಗಟ್ಟಲೆ ಭೂಮಿ ದಾನ ಮಾಡಿ ಶಾಲೆ ಕಾಲೇಜುಗಳ ಸ್ಥಾಪನೆಗೆ ನೆರವಾದವರು ಈ ವಂಶದ ಹಿರಿಯರು.ಇಂದಿಗೂ ವಿಟ್ಲದಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ.
ವಿಟ್ಲದ ಸನಿಹದಲ್ಲಿನ ಕೇಪು ಉಳ್ಳಾಲ್ತಿ ಹೆಸರುವಾಸಿ. ದಶಂಬರ ತಿಂಗಳ ಸಂಕ್ರಮಣ ಹೊತ್ತಿನ್ನಲ್ಲಿ ನಡೆಯುವ ಕಜಂಬು ಜಾತ್ರೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರನ್ನು ತನ್ನತ್ತ ಸೆಳೆಯುತ್ತದೆ.ಈ ಜಾತ್ರಾ ಸಮಯದಲ್ಲಿ ಅರಮನೆಯಿಂದ ವಾಲಗದಲ್ಲಿ ಪೆಟ್ರೋಮ್ಯಾಕ್ಸ್ ಬೆಳಕಲ್ಲಿ ಅರಸರು ಬರೋದು,ಗುತ್ತಿನ ಗುರಿಕಾರುಗಳು ನಿಂತು ಮೇಲುಸ್ತುವಾರಿ ಮಾಡಿ ಜನರನ್ನು ನಿಯಂತ್ರಣ ಮಾಡೋದು ಇನ್ನೆಲ್ಲೂ ಕಾಣಸಿಗದು.ಇದು ವಿಟ್ಲ ಸೀಮೆ ದೇಗುಲಗಳಲ್ಲಿ ಮಾತ್ರ ಕಾಣಬಹುದು .ಫೋಟೋ: ವಿಟ್ಲ ಅರಮನೆ

ಕೇಪು ಉಳ್ಳಾಲ್ತಿ ದೇವಸ್ಥಾನ


ಮಂಗಳೂರು ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೇಟೆಯಿಂದ ಸುಮಾರು ೫-೬ ಕಿ.ಮಿ. ದೂರದಲ್ಲಿ ಹಸಿರು ತೋಟದ ಮಧ್ಯೇ ಉಳ್ಳಾಲ್ತಿ ಎಂದೇ ಭಕ್ತರ ಬಾಯಲ್ಲಿ ಜನಜನಿತವಾಗಿರುವ ಕೇಪು ದುರ್ಗಾಪರಮೇಶ್ವರಿ ಸನ್ನಿಧಾನವಿದೆ.ಈ ದೇಗುಲದಲ್ಲಿನ ದೇವಿ ಭಕ್ತರ ಪಾಲಿಗೆ ಬಯಸಿದ್ದನ್ನು ಕರುಣಿಸುವ ಕಾಮಧೇನು.ದಶಂಬರ ತಿಂಗಳ ೧೪ (ಧನುಸಂಕ್ರಮಣ)ದಂದು ಇಲ್ಲಿ ನಡೆಯುವ ಜಾತ್ರೆ "ಕಜಂಬು" ಎಂದೆ ಖ್ಯಾತಿ ಹೊಂದಿದೆ.ಕಜಂಬು ಜಾತ್ರೆಯ ದಿನ ವಿಟ್ಲ ಸೀಮೆಯ ಭಕ್ತಾದಿಗಳು ಮತ್ತು ವಿಟ್ಲದ ಅರಸು ಮನೆತನದ ವಂಶಸ್ಥರು ತಮ್ಮ ಮನೆಯ ಮಕ್ಕಳನ್ನು ಉಳ್ಳಾಲ್ತಿ ದೇವರ ಸನ್ನಿಧಿಗೆ ಒಪ್ಪಿಸುವ ಸಂಪ್ರದಾಯವನ್ನು ನಡೆಸಿಕೊಡುತ್ತಾರೆ.ದೇಗುಲದ ಸಮೀಪದಲ್ಲಿಯೇ ಹರಿಯುವ ತೊರೆಯ ನೀರಿನಲ್ಲಿ ಸ್ನಾನ ಮಾಡಿಸಿ ತಂದ ಮಕ್ಕಳು ದೇವಿಯ ಗುಡಿಯ ಮೆಟ್ಟಿಲಿಗೆ ನಮಸ್ಕರಿಸಿ ಅಂಗಣದ ನಾಲ್ಕೂ ದಿಕ್ಕುಗಳಲ್ಲಿ ಕುಳಿತ ದೇವರ ಕೆಲಸ ಮಾಡುವ " ನಾಲ್ಪೋಳು" ಎಂದು ಕರೆಯಲ್ಪಡುವ ನಾಲ್ಕು ಆಳುಗಳಿಗೆ ಕಾಣಿಕೆ ಹಾಕಿ ಮುಂದುವರಿಯುತ್ತಾರೆ.ಸಮೀಪದಲ್ಲಿಯೇ ಇರುವ ಸುಬ್ರಾಯ ದೇವಸ್ಥಾನದಲ್ಲಿ ಭೋಜನ ವ್ಯವಸ್ಥೆ ಇರುತ್ತದೆ.
ಜಾತ್ರೆಯ ನಂತರದ ದಿನಗಳಲ್ಲಿ ಕೋಳಿ ಅಂಕ,ಭೂತ ನೇಮವೂ ನಡೆಯುತ್ತದೆ.ಕರಾವಳಿ ಜನರ-ತುಳುನಾಡಿನ ಜಾನಪದಕಲೆ ಮತ್ತು ಸಂಸ್ಕೄತಿಯನ್ನು ಪ್ರತಿಬಿಂಬಿಸುವ ಕಜಂಬು ಜಾತ್ರಾ ಸಮಯದಲ್ಲಿ ಸಂತೆ-ವ್ಯಾಪಾರ ವಹಿವಾಟು ನಡೆಸುವಂತಿಲ್ಲ.
ಕಜಂಬು ಜಾತ್ರೆ ನೋಡಬೇಕೆಂದಿದೆಯೇ ಹಾಗಿದ್ದಲ್ಲಿ ದಶಂಬರ ತಿಂಗಳಿನ ೧೪-೧೮ದಂದು ಬಿಡುವಿಟ್ಟುಕೊಳ್ಳಿ.ಜಾತ್ರೆಯ ಬಳಿಕ ಮಲರಾಯ ದೈವದ ನೇಮ ಜರುಗುತ್ತದೆ.
ಜಿಲ್ಲಾ ಕೇಂದ್ರ ಮಂಗಳೂರಿನಿಂದ ಸುಮಾರು ೩೬ಕಿ.ಮಿ ದೂರವಿರುವ ವಿಟ್ಲದಿಂದ ಸುಮಾರು ೭ಕಿ.ಮೀ ಅಂತರದಲ್ಲಿ ಈ ದೇಗುಲವಿದೆ.

ಕೊಡಿ ಮರ - ತೈಲವಿಧಿ


ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಕೊಡಿ ಮರ -ಧ್ವಜ ಸ್ಥಂಭದ ಕೆತ್ತನೆಯ ಕೆಲಸ ಮುಗಿದು ತೈಲ ಹೊಯ್ಯುವ ಕಾರ್ಯಕ್ಕೆ ಜನವರಿ೧೩-೨೦೦೯ರಂದು ಚಾಲನೆ ಕೊಡಲಾಯಿತು.ಸುಮಾರು ೬೦೦೦ಲೀ. ಶುದ್ಧ ಎಳ್ಳೆಣ್ಣೆ ಹಿಡಿಯುವ ಟ್ಯಾಂಕಿಯಲ್ಲಿ ಕೊಡಿ ಮರವನ್ನು ಹಾಕಿದ ನಂತರ ಸೇರಿದ ಜನರೆಲ್ಲ ಭಕ್ತಿಯಿಂದ ತೈಲ ಅರ್ಪಿಸಿದರು.ಸುಮಾರು ೬೭ ಅಡಿ ಎತ್ತರದ ಕೊಡಿ ಮರಕ್ಕೆ ಅದೇ ಗಾತ್ರದ ಟ್ಯಾಂಕನ್ನೂ ದೇಗುಲದ ಒಳಭಾಗದಲ್ಲಿ ರಚಿಸಲಾಗಿದೆ.ಇನ್ನು ಸುಮಾರು ೩ ತಿಂಗಳ ತನಕ ಈ ರೀತಿಯಲ್ಲಿ ಕೊಡಿ ಮರವನ್ನು ಎಣ್ಣೆಯಲ್ಲಿಡಲಾಗುವುದು.ಕೊಡಿ ಮರದ ದೀರ್ಘಕಾಲೀನ ಬಾಳ್ವಿಕೆಗಾಗಿ ಈ ಪಾರಂಪರಿಕ ಕ್ರಮವನ್ನು ಅನುಸರಿಸಲಾಗುತ್ತದೆ